ಕುವಲಾಶ್ವ

	ಸೂರ್ಯವಂಶದ ರಾಜ. ಕುವಲಯ ವರ್ಣದ ಕುದುರೆ ಈತನ ವಾಹನವಾಗಿದ್ದುದರಿಂದ ಈ ಹೆಸರು. ಬಾಲ್ಯದ ಹೆಸರು ಋತಧ್ವಜ. ಕುವಲಯಾಶ್ವ ಎಂದೂ ದುಂಧುಮಾರ ಎಂದೂ ಕರೆಯುವುದಿದೆ. ತಂದೆ ಬೃಹದಶ್ವ (ಶತ್ರುಜಿತ್).

	 ಗಾಲವನೆಂಬ ಮುನಿಪುಂಗವ ತಪೋನಿರತನಾಗಿರಲು ಪಾತಾಳಕೇತುವೆಂಬ ಕಾಮಾರೂಪಿಯಾದ ರಾಕ್ಷಸ ಮಾಯಾವೇಷದಿಂದ ಅವರ ತಪ್ಪಸ್ಸಿಗೆ ಭಂಗ ತಂದ. ಶಾಪವಿತ್ತು ಕಂಟಕ ಪರಿಹರಿಸಿಕೊಳ್ಳೋಣವೆಂದರೆ ತಪೋನಷ್ಟವಾಗುವುದೆಂದು ಬಗೆದ ಮುನಿ ಚಿಂತಾಮಗ್ನನಾಗಿರಲು ಕುವಲಯ ವರ್ಣದ ಕುದುರೆಯೊಂದು ತಾನಾಗಿ ಆತನ ಮುಂದೆ ಬಂದು ನಿಂತಿತು. ಇದನ್ನು ಬೃಹದಶ್ವನ ಮಗ ಕುವಲಾಶ್ವನಿಗೆ ಕೊಡು ಎಂದು ಅಶರೀರವಾಣಿಯಾಗಲು ಮುನಿ ಹಾಗೆಯೇ ಮಾಡಿ ತನ್ನ ಸಂಕಟವನ್ನು ಆತನಲ್ಲಿ ಹೇಳಿಕೊಂಡ. ಬೃಹದಶ್ವ ಕುವಲಯಾಶ್ವವನ್ನೇರಿ ರಾಕ್ಷಸನನ್ನು ಅಟ್ಟಿಸಿಕೊಂಡು ಹೊರಟ. ಆದರೆ ರಾಕ್ಷಸ ಹಂದಿಯ ವೇಷ ತಾಳಿ ಭೂಮಿಯಲ್ಲಿ ಬಿಲಮಾಡಿಕೊಂಡು ಪಾತಾಳವನ್ನು ಹೊಕ್ಕ. ಹಿಂದಟ್ಟಿಹೋದ ಕುವಲಯಾಶ್ವ ಅಲ್ಲಿ ಈರ್ವರು ಸುಂದರಿಯರನ್ನು ಕಂಡು, ಅವರಲ್ಲಿ ಹಿರಿಯವಳು ಪುಷ್ಕರಶಾಲಿಯ ಪತ್ನಿ ಕುಂಡಲೆಯೆಂತಲೂ ಮತ್ತೊಬ್ಬಳು ಆಕೆಯ ಅವಿವಾಹಿತ ತಂಗಿ ಮದಾಲಸೆಯೆಂದೂ ತಿಳಿದುಕೊಂಡ; ಮಲ್ಲ ಯುದ್ಧದಲ್ಲಿ ಪಾತಾಳಕೇತುವನ್ನು ಜಯಿಸಿ, ಕೊಂದು ಮದಾಲಸೆಯನ್ನು ವಿವಾಹವಾಗಿ ತನ್ನ ರಾಜಧಾನಿಯಾದ ಅಯೋಧ್ಯೆಗೆ ಹಿಂದಿರುಗಿದ.

	ಪಾತಾಳಕೇತುವಿನ ತಮ್ಮನಾದ ತಾಳಕೇತು ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತ ಒಮ್ಮೆ ಕುವಲಾಶ್ವ ಅಶ್ವಾರೂಢನಾಗಿ ವಿಹರಿಸುತ್ತಿರಲು ಮುನಿರೂಪಧಾರಿಯಾಗಿ ತಾನು ಯಜ್ಞದೀಕ್ಷಿತನೆಂದು ಹೇಳಿಕೊಂಡು ದ್ರವ್ಯಯಾಚನೆ ಮಾಡಿದ. ನಂಬಿದ ರಾಜ ತನ್ನ ರತ್ನಹಾರವನ್ನೇ ದಾನವೀಯಲು, ಶೀಘ್ರವಾಗಿ ಅದನ್ನೊಯ್ದು ಆತನ ಪ್ರಿಯ ರಾಣಿ ಮದಾಲಾಸೆಗೆ ತೋರಿಸಿ ಪತಿ ಹತನಾದನೆಂದು ತಿಳಿಸಲು ಆಕೆ ದುಃಖಾತಿಶಯದಿಂದ ಕುಸಿದು ಸತ್ತಳು. ವಿಷಯ ತಿಳಿದ ಕುವಲಾಶ್ವ ಚಿಂತಾಕ್ರಾಂತನಾಗಿ ದುಃಖಿಸುತ್ತಿರಲು ನಾಗಕುಮಾರರು ಮದಾಲಸೆಯನ್ನು ಬದುಕಿಸಿಕೊಟ್ಟರು.

	ಕುವಲಾಶ್ವನಿಗೆ ಧುಂಧುಮಾರನೆಂಬ ಹೆಸರು ಬಂದದು ಹೀಗೆ: ಮರಳಸಾಗರ ವಾಸಿಯಾದ ಧುಂಧುವೆಂಬ ರಾಕ್ಷಸನೊಬ್ಬ ಉತ್ತಂಕನೆಂಬ ಮಹರ್ಷಿಯ ತಪ್ಪಸ್ಸಿಗೆ ಭಂಗವನ್ನುಂಟು ಮಾಡುತ್ತಿದ್ದ. ಕುವಲಯಾಶ್ವ ತನ್ನ ಇಪ್ಪತ್ತೊಂದು ಸಹಸ್ರ ಸೈನ್ಯದೊಡನೆ ಅವನನ್ನು ಹುಡುಕಲು ಹೊರಟ. ಆ ರಾಕ್ಷಸಬಲದ ಪ್ರಖರತೇಜಸ್ಸಿನಿಂದ ಮೂವರನ್ನುಳಿದು ಎಲ್ಲರೂ ದಗ್ಧರಾದರು. ಆದರೆ ಧುಂಧು ಯುದ್ಧದಲ್ಲಿ ಸತ್ತ. ದೃಢಾಶ್ವ, ಕಪಿಲಾಶ್ವ ಮತ್ತು ಚಂದ್ರಾಶ್ವರೆಂಬ ಮೂವರು ಪುತ್ರರೊಡನೆ ಕುವಲಯಾಶ್ವ ತನ್ನ ಪಟ್ಟಣಕ್ಕೆ ಹಿಂದಿರುಗಿದ. ಈತನ ಪರಾಕ್ರಮವನ್ನು ಮೆಚ್ಚಿದ ಉತ್ತಂಕ ಮಹರ್ಷಿ ಧುಂಧುಮಾರ (ಧುಂಧುವನ್ನು ಕೊಂದವನು) ಎಂಬ ಬಿರುದನ್ನಿತ್ತ. ಕುವಲಾಶ್ವನ ಮಕ್ಕಳ ಸಂಖ್ಯೆ ಇಪ್ಪತ್ತೊಂದು ಸಹಸ್ರವೆಂತಲೂ ಒಂದುನೂರು ಎಂತಲೂ ಮೂರೇ ಎಂತಲೂ ಬೇರೆ ಬೇರೆ ಪಾಠಗಳಿವೆ.

(ಸಿ.ಜಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ